ತಾಳಬದ್ಧ ಚಟುವಟಿಕೆಗಳು -
ತಾಳಬದ್ಧ ಚಟುವಟಿಕೆ (ರಿದ್ಮಿಕ್ ಆ್ಯಕ್ಟಿವಿಟಿ) ಎಂಬ ಮಾತನ್ನು ಸಾಮಾನ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಸಮಾನ ರೀತಿಯ ಕಾಲಗತಿಯನ್ನನುಸರಿಸಿ ಅನುಕ್ರಮ ಶಬ್ದ(ತಾಳ)ಗಳು ಬರುವಂತೆ ಮಾಡಿರುವ ವ್ಯವಸ್ಥೆಯೆ ತಾಳಬದ್ಧತೆ. ವಸ್ತುಗಳ ಅಥವಾ ದೇಹದ ಅಂಗಾಗಗಳ ಚಲನೆಯಲ್ಲಿ ಅಥವಾ ಧ್ವನಿ ಸ್ವರ ಶಬ್ದಗಳಲ್ಲಿ ಸಮಕಾಲದ ಗತಿಯಿದ್ದು ಸರಳವಾಗಿ ತಾಳ ಹಾಕಬಹುದಾದರೆ ಅಂತ ಕ್ರಿಯೆಯನು ತಾಳಬದ್ಧ ಕ್ರಿಯೆ ಎಂದು ಹೇಳಬಹುದು. ಇಂಥ ಕ್ರಿಯೆಗಳ ಕಾರ್ಯರೂಪಕ್ಕೆ ಬರುವಂತೆ ಶಾಲೆಗಳಲ್ಲಿ ಸಂಯೋಜಿಸಿರುವ ಚಟುವಟಿಕೆಗಳೇ ತಾಳಬದ್ಧ ಚಟುವಟಿಕೆಗಳು. ಇಂಥ ಚಟುವಟಿಕೆಗಳಲ್ಲಿ ದೃಶ್ಯದ ತಾಳಬದ್ಧತೆಯ ಜೊತೆಯಲ್ಲಿ ಶ್ರವಣದ ತಾಳಬದ್ಧತೆಯೂ ಧ್ವನಿಯ ತಾಳಬದ್ಧತೆಯೂ ಒಂದಕ್ಕೊಂದು ಸಮರಸವಾಗಿ ಯೋಜಿಸಲ್ಪಟ್ಟು ಎಲ್ಲ ಅಂಶಗಳೂ ಒಂದೇ ಕ್ರಿಯೆ ಮತ್ತು ಚಟುವಟಿಕೆಯಾಗಿ ಪರಿಣಮಿಸುತ್ತವೆ. ಮಕ್ಕಳ ದೇಹದ ಬೆಳೆವಣಿಗೆಗೂ ಮನಸ್ಸಿನ ವಿಕಾಸಕ್ಕೂ ಆತ್ಮದ ಉನ್ನತಿಗೂ ಇವು ಅವಶ್ಯಕವೆಂಬುದು ಶಿಕ್ಷಣತಜ್ಞರ ಅಭಿಪ್ರಾಯ. ಈ ಕಾರಣದಿಂದ ಇವಕ್ಕೆ ಪ್ರಾಥಮಿಕ ಶಾಲೆಗಳಲ್ಲಿ ಮಹತ್ತ್ವ ಕೊಡಲಾಗಿದೆ. 

ತಾಳಬದ್ಧ ಚಟುವಟಿಕೆಗಳು ಮಕ್ಕಳ ಕಣ್ಣು ಕಿವಿ ಮತ್ತು ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ. ಮಕ್ಕಳು ಅವುಗಳಲ್ಲಿ ತಲ್ಲೀನತೆಯಿಂದ ಪಾಲ್ಗೊಳ್ಳತ್ತಾರೆ. ಆ ಚಟಿವಟಿಕೆಗಳಿಂದ ಮಕ್ಕಳಲ್ಲಿ ಪರಿಶೀಲನ ಶಕ್ತಿಯೂ ರಚನೆ ಮತ್ತು ಸಂಯೋಜನೆಯ ಕೌಶಲ್ಯಗಳೂ ವೃದ್ಧಿಯಾಗುತ್ತವೆ. ಮಕ್ಕಳು ತಮ್ಮ ಅಂಗಾಂಗಗಳ ಸ್ನಾಯುಗಳ ಮೇಲೆ ಹತೋಟಿ ಪಡೆದು ಅಗತ್ಯವಾದಂತೆ ಅವನ್ನು ಚಲಿಸಬಲ್ಲ ಶಕ್ತಿ ಪಡೆಯುತ್ತಾರೆ. ಶ್ರವಣೇಂದ್ರಿಯಕ್ಕೆ ವಿವಿಧ ಶಬ್ದಗಳನ್ನು ಅರ್ಥಪೂರ್ಣತೆಯಿಂದ ಗ್ರಹಿಸುವ ಅಭ್ಯಾಸವಾಗುತ್ತದೆ. ಧ್ವನಿಪೆಟ್ಟಿಗೆಯ ಮೇಲೆ ಹತೋಟಿ ಬೆಳೆದು ಅರ್ಥಪೂರ್ಣವಾಗಿ ಮಾತನಾಡುವ ಕಲೆ ಸಿದ್ಧಿಸುತ್ತದೆ. ಮಿಗಿಲಾಗಿ ಅವರ ಮನಸ್ಸು ಬಾಹ್ಯ ಪ್ರಪಂಚದ ಅನುಭವಗಳನ್ನು ಪಡೆದು ಅವುಗಳಿಗೆ ಅನುರೂಪವಾಗಿ ತಮ್ಮ ವರ್ತನೆಯನ್ನು ರೂಪಿಸಿಕೊಳ್ಳಬಲ್ಲವರಾಗುತ್ತಾರೆ. ವಸ್ತುಗಳ ಮತ್ತು ವ್ಯಕ್ತಿಗಳ ಚಲನೆ, ಶಬ್ದ, ಧ್ವನಿಗಳಲ್ಲಿ ತಾಳಬದ್ಧತೆಯಂಥ ಕ್ರಮಬದ್ಧ ವಿನ್ಯಾಸವಿದ್ದರೆ ಆ ಕ್ರಿಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು, ಅದರ ಉದ್ದೇಶಗಳನ್ನು ಊಹಿಸಿಕೊಳ್ಳುವುದು ಸುಲಭವಾಗುತ್ತದೆ. ಈ ಕಾರಣಗಳಿಂದ ತಾಳಬದ್ಧ ಚಟುವಟಿಕೆಗಳು ಮಕ್ಕಳ ಸಮಗ್ರ ಶಿಕ್ಷಣದಲ್ಲಿ ಮುಖ್ಯ ಸ್ಥಾನಗಳಿಸಿವೆ. 

	ಮಗುವಿಗೆ ತಾಳಬದ್ಧಕ್ರಿಯೆ ಮತ್ತು ಚಟುವಟಿಕೆಗಳ ಅನುಭವ ಹೇಗೆ ಮೊದಲುಗೊಂಡು ಬೆಳೆಯುವುದೆಂಬುದನ್ನು ನೋಡೋಣ. ತಾಳಬದ್ಧತೆ ಪ್ರಕೃತಿಯಲ್ಲಿ ಕಂಡುಬರುವ ಒಂದು ಸಾಮಾನ್ಯ ಅಂಶ. ಗಾಳಿ ಬೀಸುವಾಗ ಮರದ ಕೊಂಬೆಗಳು ಆಲುಗಾಡಿ ಎಲೆಗಳು ಮರ್ಮರ ನಿನಾದ ಗೈಯುತ್ತ ಒಂದು ತಾಳಬದ್ಧಗತಿಯಲ್ಲಿ ಅಲುಗಾಡುತ್ತವೆ. ಗುಡು ಗುಡು ಎಂದು ಶಬ್ದಮಾಡುವ ಗುಡುಗಿನಲ್ಲಿ ಠಳಾರನೆ ಹೊಳೆಯುವ ಮಿಂಚಿನ ಗತಿಯಲ್ಲಿ ಒಂದು ಬಗೆಯ ತಾಳಗತಿಯನ್ನು ಗಮನಿಸಬಹುದು. ಹಕ್ಕಿಗಳ ನಿನಾದದಲ್ಲೂ ನದಿಗಳ ಕಲರವದಲ್ಲೂ ತಾಳಗತಿಯನ್ನು ಗುರುತಿಸಬಹುದು. ಜಿಂಕೆ ಮೊದಲಾದ ವನ್ಯಪ್ರಾಣಿಗಳೂ ನಾಯಿ ಮೊದಲಾದ ಸಾಕುಪ್ರಾಣಿಗಳೂ ತಮ್ಮಜಿಗಿದಾಟ ನೆಗೆದಾಟಗಳಲ್ಲಿ ತಾಳಬದ್ಧತೆಯನ್ನು ಪ್ರದರ್ಶಿಸುಸತ್ತವೆ. ಈ ಜಿಗಿದಾಟ ನೆಗೆದಾಟಗಳಿಂದ ಉಂಟಾಗುವ ಶಬ್ದವೂ ಸಹಜವಾಗಿ ತಾಳಬದ್ಧವಾಗಿಯೇ ಇರುತ್ತದೆ. ತಮ್ಮ ಮುದ್ದಿನ ನಾಯಿಮರಿ ತನ್ನ ಬಾಲವನ್ನು ತಾಳಬದ್ಧವಾಗಿ ಅಲ್ಲಾಡಿಸುವಾಗ ಮಕ್ಕಳು ಆಸಕ್ತಿ ಕುತೂಹಲಗಳಿಂದ ಅದನ್ನು ಪರಿಶೀಲಿಸುವರು. 
ವ್ಯಕ್ತಿಯ ದೈಹಿಕ ಕ್ರಿಯೆಗಳಿಂದ ನಡಿಗೆ, ಉಸಿರಾಟ, ರಕ್ತಪರಿಚಲನೆ ನರಗಳ ಸ್ಪಂದನೆ ಮೊದಲಾದ ಕ್ರಿಯೆಗಳೂ ಒಂದು ತಾಳಗತಿಯಲ್ಲಿಯೇ ನಡೆಯುತ್ತಿರುತ್ತವೆ. ದೇಹದ ನಾಡಿಯ ಮಿಡಿತಗಳು ಈ ವಿಷಯವನ್ನು ಸೂಚಿಸುತ್ತವೆ. ಹಗಲುರಾತ್ರಿಗಳ ಬದಲಾವಣೆಗಳೂ ಋತುಮಾನಗಳೂ ವಿಶಾಲವಾದ ದೃಷ್ಟಿಯಿಂದ ನೋಡಿದರೆ, ತಾಳಬದ್ಧವಾಗಿರುವುವು. ಇಂಥ ತಾಳಬದ್ಧ ಪ್ರಕೃತಿಯ ಪರಿಸರದಲ್ಲಿ ಜನಿಸಿದ ಶಿಶು ತಾಳಕ್ಕೆ ಮಾರುಹೋಗುವುದು ಸ್ವಾಭಾವಿಕ. ತಾಯಿ ಮಗುವನ್ನು ತೊಟ್ಟಿಲಲ್ಲಿಟ್ಟು ತೂಗಿ ಅದರ ತಾಳಗತಿಗೆ ಅನುಸಾರವಾಗಿ ಜೋಜೋ ಹಾಡುವಳು. ಈ ತಾಳಬದ್ಧ ಚಲನೆ ಮತ್ತು ಸ್ವರಗಳಿಗೆ ಮೋಹಗೊಂಡು ಮಗು ಅಳುವನ್ನು ನಿಲ್ಲಿಸಿ, ಹರ್ಷಗೊಂಡು, ಸಮಾಧಾನ ಚಿತ್ತದಿಂದ ನಿದ್ದೆ ಹೋಗುವುದು. 

ಹೀಗೆ ಮಗುವಿಗೆ ಹುಟ್ಟಿದಂದಿನಿಂದಲೇ ತಾಳಬದ್ಧ ಚಟುವಟಿಕೆಗಳ ಅನುಭವವನ್ನು ಹಿರಿಯರು ಉದ್ದೇಶ ಪೂರ್ವಕವಾಗಿಯೇ ಮಾಡಿಕೊಡುವರು. ತೊಟ್ಟಲು ತೂಗುವಾಗ ಜೋಜೋ ಕಂದ ಮೊದಲಾಗಿ ಜೋಗುಳ ಹಾಡುವುದು. ಮಗುವನ್ನು ಎತ್ತಿಕೊಂಡು ಪಕ್ಕದಿಂದ ಪಕ್ಕಕ್ಕೆ ಆಡಿಸುವುದು, ಎದೆಯಮೇಲೆ ಮಲಗಿಸಿಕೊಂಡು ಮೃದವಾಗಿ ತೂಗಾಡಿಸುವುದು, ಮಗುವನ್ನು ಆಡಿಸುವಾಗ ದೂರಿ ದೂರಿ ಹೇಳುತ್ತ ಅದಕ್ಕೆ ಅನುಸಾರವಾಗಿ ಹಿಂದಕ್ಕೂ ಮುಂದಕ್ಕೂ ಅಲುಗಾಡಿಸುವುದು, ಅಂಗೈಗಳ ಮೇಲೆ ಮಗುವನ್ನು ಮಲಗಿಸಿಕೊಂಡು ಮೇಲಕ್ಕೆ ಎತ್ತಿ ನಿಧಾನವಾಗಿ ಕೆಳಕ್ಕೆ ಇಳಿಸುವುದೂ ಕೂಸುಮರಿ ಮಾಡಿಕೊಂಡು ಹಾಡುಹೇಳುತ್ತ ದೇಹವನ್ನು ತಾಳಬದ್ಧವಾಗಿ ಕುಲುಕಿ ನಗಿಸಿ ನಲಿಸುವುದು - ಇವೇ ಮೊದಲಾದ ಚಟುವಟಿಕೆಗಳಲ್ಲಿ ಉದ್ದೇಶಪೂರ್ವಕವಾದ ತಾಳಬದ್ಧತೆಯಿದೆ. ಮಗು ನಡಿಗೆಯನ್ನು ಕಲಿತ ಮೇಲೆ ಪುಟ್ಟಪುಟ್ಟ ಹೆಜ್ಜೆಯಿಡುತ್ತ ಓಡಾಡುವುದು, ಆಗ ತಾಯಿತಂದೆಯರು, ಅಕ್ಕತಂಗಿಯರು ಅಣ್ಣತಮ್ಮಂದಿರು ಅದಕ್ಕೆ ಪುಟ್ಟ ಪುಟ್ಟ ಹೆಜ್ಜೆ ಪುಟಾಣಿ ಹೆಜ್ಜೆ ಮೊದಲಾಗಿ ತಾಳಬದ್ಧತೆಯ ಅನುಭವ ಮಾಡಿಕೊಡುವರು. ಮಗುವಿನ ಹೆಜ್ಜೆಗಳ ತಾಳದ ಸಂತೋಷವನ್ನು ಸವಿಯುವ ಉದ್ದೇಶದಿಂದ ಮಗುವಿನ ಕಾಲುಗಳಿಗೆ ಗೆಜ್ಜೆಕಟ್ಟಿ ನಡೆಸುವುದೂ ಉಂಟು. 
ಶಿಶುವಿಹಾರಗಳಲ್ಲಿ : ಚಟುವಟಿಕೆಗಳ ಅನುಭವವನ್ನು ಮುಂದುವರಿಸಿಕೊಂಡು ಬರುವ ಉದ್ದೇಶದಿಂದಲೇ ಶಿಶುಶಿಕ್ಷಣಶಾಲೆಗಳಲ್ಲಿ ಮಕ್ಕಳಿಗೆ ಉಯ್ಯಾಲೆಯಾಟ, ಹಿಂದಕ್ಕೂ ಮುಂದಕ್ಕೂ ಅಲುಗಾಡುವ ಮರಗುದುರೆಯ ಸವಾರಿ, ಕೆಳಗಿನಿಂದ ಮೇಲಕ್ಕೆ ಮೇಲಿಂದ ಕೆಳಕ್ಕೆ ಏರಿಳಿಯುವಂತೆ ಮಾಡಿರುವ ಏತನ ಆಟ, ಅಪ್ಪಾಳೆ ತಿಪ್ಪಾಳೆ ತಿರುಗುವುದು, ಅಂಗೈಮೇಲೆ ಚಪ್ಪಾಳೆ ತಟ್ಟುತ್ತ ಕುಣಿಯುವುದು, ಜಲ್ ಜಲ್ ಎಂದು ಶಬ್ದಮಾಡುವ ಜಲ್ಲರಿಗಳಲ್ಲಿ ತಾಳಬದ್ಧವಾಗಿ ಬಡಿಯುತ್ತ ಕುಣಿಯುವುದು-ಇವೇ ಮೊದಲಾದ ನೂರಾರು ಚಟುವಟಿಕೆಗಳನ್ನು ಒದಗಿಸುತ್ತಾರೆ. ಚಿಕ್ಕ ಚಿಕ್ಕ ಶಿಶುಗೀತೆಗಳನ್ನು ಕಲಿಸುತ್ತಾರೆ. ಈ ಗೀತೆಗಳಲ್ಲಿ ಅರ್ಥಕ್ಕಿಂತ ಹೆಚ್ಚಾಗಿ ಪದಗಳ ತಾಳಬದ್ಧತೆಗೇ ಪ್ರಾಮುಖ್ಯ. ಅನುಕರಣ ಶಬ್ದಗಳೂ ಪುನರಾವರ್ತ ಶಬ್ದಗಳೂ ಪ್ರಾಸ ಶಬ್ದಗಳೂ ಶಿಶುಗೀತೆಗಳ ಜೀವಾಳ. ಶಿಶುಶಿಕ್ಷಣಗ್ರಂಥದಲ್ಲಿ ತಾಳಬದ್ದ ಚಟುವಟಿಕೆಗಳು ಯಾವ ನಿಯಮ ನಿಬಂದನೆ, ಕಟ್ಟುಪಾಡುಗಳ ಚೌಕಟ್ಟುಗಳಿಗೆ ಒಳಪಡುವಂಥವಲ್ಲ. ಮಕ್ಕಳಿಗೆ ನಿರಾಂತಕವಾಗಿ ಸ್ವೇಚ್ಛೆಯಿಂದ ಮನಬಂದಂತೆ ಆ ಚಟುವಟಿಕೆಗಳಲ್ಲಿ ಪಾತ್ರವಹಿಸುವ ಸ್ವಾತಂತ್ರ್ಯವಿರಬೇಕು. ಅಂಥ ವಾತಾವರಣವಿದ್ದರೆ ಮಾತ್ರ ತಾಳಬದ್ದ ಚಟುವಟಿಕೆಗಳು ಶಿಶುಶಿಕ್ಷಣಕ್ಕೆ ಸಹಕಾರಿಯಾಗಬಲ್ಲವು. 

ಪ್ರಾಥಮಿಕ ಹಂತದಲ್ಲಿ : ಮಕ್ಕಳು ಬೆಳೆದು ಐದಾರು ವರ್ಷ ತುಂಬಿದಮೇಲೆ ಎಂದರೆ ಪ್ರಾಥಮಿಕ ಶಿಕ್ಷಣದ ಮೊದಲ ಹಂತವನ್ನು ಏರಿದ ಮೇಲೂ ತಾಳಬದ್ಧ ಚಟುವಟಿಕೆಗಳಲ್ಲಿ ಅವರ ಆಸಕ್ತಿ ಮುಂದುವರಿಯುತ್ತದೆ. ಆದರೆ ಆ ಆಸಕ್ತಿಯ ಆಯಾಮ ಮತ್ತು ವೈಶಾಖ್ಯ ಕಡಿಮೆಯಾಗುತ್ತವೆ. ಏಕೆಂದರೆ ಆ ಹಂತದಲ್ಲಿ ಮಗು ನಿಯಮಬದ್ಧವಾದ ಅಕ್ಷರಾಭ್ಯಾಸವೇ ಮೊದಲಾದ ಪಾಠಕ್ರಮಗಳಿಗೆ ಗಮನಕೊಡಬೇಕಾಗುವುದು. ಈ ಮಟ್ಟದಲ್ಲಿ ಅಭಿನಯಗೀತೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ತಾಳಕ್ಕೆ ಸರಿಯಾಗಿ ಹಾಡುವುದೂ ಅವುಗಳ ಅರ್ಥ ಸ್ಫುಟಗೊಳ್ಳುವಂತೆ ಅಭಿನಯಿಸುವುದೂ ಈ ಗೀತೆಗಳ ಮುಖ್ಯ ಲಕ್ಷಣ. ಮಕ್ಕಳು ಮೇಲಿನ ಹಂತಗಳಿಗೆ ಏರಿದಂತೆ ತಾಳಬದ್ಧ ಚಟುವಟಿಕೆಗಳು ಹೆಚ್ಚು ಹೆಚ್ಚು ನಿಯಮಬದ್ಧವಾಗುತ್ತ ಬರುತ್ತವೆ. ತಾಳಕ್ಕೆ ಸರಿಯಾಗಿ ಹೆಜ್ಜೆಯಿಟ್ಟು ನಡೆಯವುದು ಕುಪ್ಪಳಿಸುವುದು, ದೂರಕ್ಕೆ ನೆಗೆಯುವುದು. ಎತ್ತರಕ್ಕೆ ಜಿಗಿಯುವುದು, ಹಗ್ಗದ ಕುಣಿತ ಪಲ್ಪಿಹೊಡೆದು ಉರುಳುವುದು, ಸಾಮೂಹಿಕವಾಗಿ ರಾಷ್ಟ್ರಭಕ್ತಿ ಗೀತೆಗಳೇ ಮೊದಲಾದುವನ್ನು ಹಾಡುವುದು, ಕುಂಟಲಪಿ ಆಟ, ಲಗೋರಿ ಆಟ, ಚಿನ್ನಿ-ದಾಂಡು ಬುಗುರುಯಾಟ, ಕೋಲಾಟ-ಇವೇ ಮೊದಲಾದವು ಸಾಮಾನ್ಯವಾಗಿ ಬಳಕೆಯಲ್ಲಿರುವ ತಾಳಬದ್ಧ ಚಟುವಟಿಕೆಗಳು. 
ಪ್ರೌಢಶಾಲೆಗಳಲ್ಲಿ : ತಾಳಬದ್ಧ ಚಟುವಟಿಕೆಗಳ ಸಂಖ್ಯೆ ಈ ಹಂತದಲ್ಲಿ ಇನ್ನೂ ಕಡಿಮೆಯಾಗುವುದು. ಸರಳ ನರ್ತನ ಮತ್ತು ಹಾಡುಗಳ ರೂಪದಲ್ಲೂ ಶಾಸ್ತ್ರೀಯ ನೃತ್ಯ ಸಂಗೀತಗಳ ರೂಪದಲ್ಲೂ ವಿವಿಧ ಪ್ರಕಾರಗಳ ಕವಾಯಿತುಗಳ ರೂಪದಲ್ಲೂ ವಿಧವಿಧವಾದ ಪಂದ್ಯಾಟಗಳಲ್ಲೂ ವಾಕ್ಯವೃಂದಗಳಲ್ಲೂ ಅದು ಕಂಡುಬರುತ್ತದೆ. ಇವು ಸಾಮಾನ್ಯವಾಗಿ ಪಠ್ಯೇತರ ಚಟುವಟಿಕೆಗಳಾದರೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವುಗಳಲ್ಲಿ ಬಹು ಆಸಕ್ತಿಯಿಂದ ಪಾಲ್ಗೊಳ್ಳುವರು. 
ಉನ್ನತ ಶಿಕ್ಷಣದಲ್ಲಿ : ಕಾಲೇಜು ಮಟ್ಟದಲ್ಲಿ ತಾಳಬದ್ಧ ಚಟುವಟಿಕೆಗಳು ಸಾಮೂಹಿಕವಾಯಿತು. ವಾದ್ಯಗೋಷ್ಠಿ, ರಾಷ್ಟ್ರೀಯ ರಕ್ಷಣಾದಳ ಮೊದಲಾದ ಉಚ್ಚಮಟ್ಟದ ದೈಹಿಕ ಮತ್ತು ಸಾಮಾಜಿಕ ಶಿಕ್ಷಣ ಕ್ರಮಗಳ ರೂಪವನ್ನು ತಾಳಿತ್ತವೆ. ಈ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಡನೆ ಸುಸಂಬದ್ಧವಾಗಿ ಸಮರಸವಾಗಿ ಪಾಲ್ಗೊಂಡು ಒಂದು ದಳದಲ್ಲಿರುವ ಎಲ್ಲರೂ ಒಂದೇ ವ್ಯಕ್ತಿಯಂತೆ, ಏಕಮುಖವಾಗಿ ಏಕೋದ್ದೇಶದಿಂದ ವ್ಯವಹರಿಸಬೇಕಾಗುವುದು. ಇದಕ್ಕೆ ಸಹಕಾರಿಯಾಗಿ ಮತ್ತು ಸ್ಫೂರ್ತಿದಾಯಕವಾಗಿ ಕೆಲವು ಪ್ರಕಾರಗಳ ತಾಳಮೇಳ ವಾದ್ಯಗಳನ್ನು ಬಳಸುತ್ತಾರೆ. 

ತಾಳಬದ್ಧ ಚಟುವಟಿಕೆಗಳು ಶಾಲಾಕಾಲೇಜುಗಳಲ್ಲಿ ಮಾತ್ರವಲ್ಲದೆ ಹೊರಗೆ ವಯಸ್ಕರಲ್ಲಯೂ ಕಂಡುಬರುತ್ತವೆ. ಸ್ವಾತಂತ್ರ್ಯೋತ್ಸವ, ವಿಜಯದಶಮಿ, ಹುತ್ತರಿ, ಸುಗ್ಗಿ, ಪೊಂಗಲ್, ದುರ್ಗಾಪೂಜೆ, ರಥೋತ್ಸವ ಮೊದಲಾದ ವಿಶೇಷ ಹಬ್ಬದ ಮತ್ತು ಜಾತ್ರೆಯ ಸಂದರ್ಭಗಳಲ್ಲಿ ಗ್ರಾಮ ಮತ್ತು ನಗರಗಳಲ್ಲಿ ಯುವಕ ಯುವತಿಯರು, ಕೋಲಾಟ, ನರ್ತನ, ಲಾವಣಿ, ದೇವರಹಾಡು, ಕಂಸಾಳೆಪದ ಮೊದಲಾದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ನಲಿಯುವರು. ಕತ್ತಿವರಸೆ, ದೊಣ್ಣೆವರಸೆ, ಯಕ್ಷಗಾನ ವಿವಿಧ ವೇಷಭೂಷಣಗಳು ಮೊದಲಾದ ಮನೋರಂಜನೆಯ ಚಟುವಟಿಕೆಗಳನ್ನು ಪ್ರದರ್ಶಿಸುವರು. ಇವೆಲ್ಲವೂ ಬಹುತೇಕ ತಾಳಬದ್ಧ ಚಟುವಟಿಕೆಗಳೇ. 

ಮಕ್ಕಳ ಸರ್ವತೋಮುಖವಾದ ಬೆಳವಣಿಗೆಯ ಮತ್ತು ಶಿಕ್ಷಣದ ಜವಾಬ್ದಾರಿ ಹೊತ್ತು ಅದರಲ್ಲಿ ಆಸಕ್ತಿ ವಹಿಸುವ ತಾಯಿತಂದೆಯರೂ ಶಿಕ್ಷಕರೂ ಮನೆಯಲ್ಲೂ ಶಾಲೆಗಳಲ್ಲೂ ವಿವಿಧ ತಾಳಬದ್ಧ ಚಟುವಟಿಕೆಗಳನ್ನು ಏರ್ಪಡಿಸಬೇಕು. ಈ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಅವರು ಕೆಲವೊಂದು ಮುಖ್ಯ ವಿಷಯಗಳನ್ನು ಗಮನಿಸಿ ಅವುಗಳನ್ನು ಆಚರಣೆಯಲ್ಲಿ ತರಬೇಕಾಗುವುದು. 1. ಒಂದು ತಾಳಬದ್ಧ ಚಟುವಟಿಕೆಯಲ್ಲಿ ಕಣ್ಣೋಟಕ್ಕೆ ಸಿಲುಕುವ ಚಲೆನ ಶ್ರವಣಕ್ಕೆ ನಿಲುಕುವ ಶಬ್ದ ಮತ್ತು ಭಾಗವಹಿಸುವ ಮಕ್ಕಳ ಧ್ವನಿ, ಈ ಮೂರರಲ್ಲೂ ಏಕ ರೀತಿಯ ತಾಳಬದ್ಧತೆಯಿರುವುದು ಅಗತ್ಯ. ಇದರಿಂದ ಮಗುವಿನ ಪರಿಸರದ ಬಾಹ್ಯ ತಾಳಬದ್ಧತೆಯೊಡನೆ ತನ್ನ ಅಂತರಿಕ ತಾಳಬದ್ಧೆಯನ್ನು ಸಮರಸಗೊಳಿಸಿ ಬಾಹ್ಯ ಜಗತ್ತಿನೊಡನೆ ಹೊಂದಿಕೊಳ್ಳುವುದು ಸುಲಭವಾಗುವುದು. 2. ತಾಳಬದ್ಧ ಚಟುವಟಿಕೆಗಳಲ್ಲಿ ಮಕ್ಕಳು ಸಹಕರಿಸಿ ಸಾಮೂಹಿಕವಾಗಿ ನಡೆಸುವಂತೆ ಪ್ರೋತ್ಸಾಹಿಸಬೇಕು. 3. ತಾಳ ಹಾಕುವ ಶಕ್ತಿ ಮಗುವಿಗೆ ಅಭ್ಯಾಸ ಬಲದಿಂದಲೇ ಬರುವುದಿಲ್ಲ. ದೈಹಿಕ ಬೆಳೆವಣಿಗೆಯಾದಂತೆ, ವಯಸ್ಸು ಹೆಚ್ಚಿದಂತೆ ತಾಳದ ಅರಿವು ಮಗುವಿನಲ್ಲಿ ಮೂಡುವುದು. ಆದುದರಿಂದ ಬಹು ಚಿಕ್ಕವಯಸ್ಸಿನಲ್ಲಿಯೇ ತಾಳದ ಕಟ್ಟು ನಿಟ್ಟಿಗೆ ಮಗುವನ್ನು ನಿರ್ಬಂಧಿಸುವುದು ಸರಿಯಲ್ಲ. ಅವುಗಳ ನಿಯಮಬದ್ಧತೆ ಮಕ್ಕಳ ವಯೋಮಿತಿಗೆ ಅನುಗುಣವಾಗಿರಬೇಕು. 4. ನ್ಯತ್ಯಸಂಗೀತಗಳು ತಾಳಬದ್ಧ ಚಟುವಟಿಕೆಗಳಲ್ಲಿ ಉನ್ನತಮಟ್ಟದವು. ಅಂಗಾಂಗಗಳು ಹಾಗೂ ಸ್ನಾಯುಗಳ ಮೇಲೆ ಸಂಪೂರ್ಣ ಹತೋಟಿ ಪಡೆದು ಹೇಗೆ ಬೇಕಾದರೂ ಚಲಿಸುವ ಶಕ್ತಿ. ಧ್ವನಿಯನ್ನು ಅದಕ್ಕೆ ತಕ್ಕಂತೆ ಉಂಟುಮಾಡುವ ಶಕ್ತಿ ಪಡೆದು ಕಾಲದ ಅಳತೆಗೆ ಸರಿಯಾಗಿ ತಾಳ ಹಾಕುವ ಅಭ್ಯಾಸ ಇವೆಲ್ಲ ವರ್ಧಿಸಿದಂತೆ ಮಕ್ಕಳು ನೃತ್ಯಸಂಗೀತಗಳಲ್ಲಿ ಯಶಸ್ವಿಯಾಗಿ ಭಾಗವಹಿಸುವುದು ಸಾಧ್ಯವಾಗುತ್ತದೆ. ಆದ್ದರಿಂದ ಈ ಚಟುವಟಿಕೆಗಳನ್ನು ಹತ್ತುಹನ್ನೆರಡು ವರ್ಷ ವಯಸ್ಸಾಗದ ಮಕ್ಕಳಿಗೆ ಕೊಡುವುದು ತರವಲ್ಲ. 5. ಚಿಕ್ಕ ಚಿಕ್ಕ ಮಕ್ಕಳಿಗೆ ಎಲ್ಲ ಪಾಠ ಪ್ರವಚನಗಳನ್ನೂ ತಾಳಬದ್ಧ ಚಟುವಟಿಕೆಗಳ ಮೂಲಕವೇ ನಡೆಸಬೇಕೆಂಬ ಉತ್ಸಾಹವೂ ನ್ಯಾಯವಲ್ಲ, ಏಕೆಂದರೆ, ಹಾಗೆ ಮಾಡಿದಲ್ಲಿ ಚಟುವಟಿಕೆಗಳು ಕೃತಕವಾಗುವುವು. ಅವುಗಳಲ್ಲಿ ಮಕ್ಕಳಿಗೆ ಆಸಕ್ತಿ ಕ್ರಮಶಃ ಕುಂದುವುದು. ಅಭಿನಯಗೀತೆ ಸ್ವಾರಸ್ಯವಾಗುತ್ತದೆಂದು ಅವನ್ನೂ ಭಾಷಾಪಾಠ, ಗಣಿತ, ವಿಜ್ಞಾನಪಾಠ ಸಮಾಜಪರಿಚಯ ಹೀಗೆ ಎಲ್ಲ ಪಾಠಗಳಲ್ಲೂ ಬಳಸುವುದು ತರವಲ್ಲ. ಇದೆಲ್ಲದಕ್ಕೂ ಒಂದು ಮಿತಿ ಅಗತ್ಯ. ಸರಮಗ್ಗಿ ಹೇಳುವುದನ್ನು ಕಲಿಸುವಾಗ ಅದನ್ನು ಒಂದು ತಾಳಬದ್ಧ ರೀತಿಯಲ್ಲಿ ನಿಧಾನವಾಗಿ ಹೇಳುವಂತೆ ಪ್ರೋತ್ಸಾಹಿಸಿ ಅಭ್ಯಾಸ ಕೊಡುವುದು ಉಪಯುಕ್ತವೆನಿಸಬಹುದು. ಇದರಿಂದ ಸ್ಫುಟವಾಗಿ ಉಚ್ಚರಿಸುವ ಅಭ್ಯಾಸ ಬಂದು, ಮಗ್ಗಿಯನ್ನು ಜ್ಞಾಪಕವಿಟ್ಟುಕೊಳ್ಳುವುದು ಸುಲಭವಾಗವುದು, ಚಾರಿತ್ರಿಕ ಪುರುಷರ, ವಿಜ್ಞಾನಿಗಳ ಮತ್ತು ಮಹಾಘಟನೆಗಳ ವಿಷಯಗಳನ್ನು ಸ್ವಲ್ಪಮಟ್ಟಿಗೆ ಲಾವಣಿ, ಅಭಿಯನಗೀತೆ ನರ್ತನ ಮೊದಲಾದವುಗಳ ಮೂಲಕ ಕಲಿಸುವುದು ಸಮಂಜಸವೆನಿಸುತ್ತದೆ. ಉಪಯೋಗಿಸುವ ತಂತ್ರ ಕೃತಕವಾಗದಂತೆ. ಅಯಾ ಸಂದರ್ಭ, ಸನ್ನಿವೇಶ, ಪಠ್ಯವಸ್ತು ಇವುಗಳಿಗೆ ಸಹಜವಾಗಿ ಹೊಂದುವ ತಾಳಬದ್ಧ ಚಟುವಟಿಕೆಯನ್ನು ಸಂಯೋಜಿಸುವುದು ಶಿಕ್ಷಕರ ಮತ್ತು ಪೋಷಕರ ಜಾಣ್ಮೆಯಾಗಿದೆ. 

ಶಿಕ್ಷಣ ಕ್ಷೇತ್ರದಲ್ಲಿ ತಾಳಬದ್ಧ ಚಟುವಟಿಕೆಗಳು ಸಾರುವ ಉದಾತ್ತ ಸಂದೇಶವೊಂದಿದೆ. ಮಾನವನ ದೇಹ, ಮನಸ್ಸುಗಳ ಪರಿಪಾಟದಲ್ಲಿ ತಾಳಬದ್ಧತೆಯಿರುವಂತೆಯೇ ಪ್ರಕೃತಿಯಲ್ಲೂ ಸುತ್ತಮುತ್ತಲಿನ ಸಮಾಜದಲ್ಲೂ ತಾಳಬದ್ಧತೆಯಿದೆ. ವ್ಯಕ್ತಿ ಪ್ರಕೃತಿಯ ಮತ್ತು ಸಮಾಜದ ತಾಳಬದ್ಧತೆಗೆ ಸಮರಸವಾಗುವಂತೆ ತನ್ನ ವರ್ತನೆಗಳ ತಾಳಬದ್ಧತೆಯನ್ನು ರೂಪಿಸಿಕೊಳ್ಳಲಾಗುವುದು. ತಪ್ಪಿದಲ್ಲಿ, ಆತ ಜೀವನದಲ್ಲಿ ಅಸುಖಿಯಾಗುವುದಲ್ಲದೇ ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತಾನೆ. ಆದುದರಿಂದ ಪರಿಸರಕ್ಕೆ ಸಮರಸವಾಗಿ ಹೊಂದುವ ತಾಳಬದ್ಧತೆ ಮಗುವಿನಲ್ಲಿ ಚಿಕ್ಕಂದಿನಿಂದಲೇ ಅಭ್ಯಾಸ ಬಲದಿಂದ ಬೆಳೆದುಬರಬೇಕು. ತಾಳಬದ್ಧ ಚಟುವಟಿಕೆಗಳನ್ನು ಸಂಯೋಜಿಸುವಲ್ಲಿ ಈ ವಿಶಾಲವಾದ ಹಾಗೂ ಉನ್ನತವಾದ ಉದ್ದೇಶವನ್ನು ಶಿಕ್ಷಕರೂ ಇತರ ಹಿರಿಯರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು.
(ಎಂ.ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ